ಬೆಂಗಳೂರು: ಹದಿನಾಲ್ಕನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಏಷಿಯನ್ ಚಲನಚಿತ್ರ ಸ್ಪರ್ಧಾ ವಿಭಾಗದಲ್ಲಿ ಇಂಡೋನೇಷಿಯಾದ ‘ಬಿಫೋರ್ ನೌ ಅಂಡ್ ದೆನ್’ ಹಾಗೂ ಇರಾನಿನ ‘ಮದರ್ ಲೆಸ್’ ಚಿತ್ರಗಳು ಮೊದಲ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದವು.

ಮಾರ್ಚ್ 30, ಗುರುವಾರದಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ನಡೆದ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರಶಸ್ತಿ ಪಡೆದ ಎಲ್ಲಾ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಏಷಿಯಾ, ಭಾರತೀಯ ಹಾಗೂ ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗಗಳಲ್ಲಿ ಕನ್ನಡ ಚಿತ್ರಗಳು ಪಾರಮ್ಯವನ್ನು ಮೆರೆದು, ಕನ್ನಡ ಚಲನಚಿತ್ರಗಳು ಅತ್ಯುತ್ತಮ ಎಂದು ವಿಶ್ವಕ್ಕೆ ತೋರಿಸಿಕೊಟ್ಟವು.        

ಏಷ್ಯನ್ ಚಲನಚಿತ್ರ ಸ್ಪರ್ಧಾ ವಿಭಾಗದಲ್ಲಿ ಕನ್ನಡದ ಬಿ ಎಸ್ ಲಿಂಗದೇವರು ನಿರ್ದೇಶನದ ‘ವಿರಾಟ ಪುರದ ವಿರಾಗಿ’ ಹಾಗೂ ಚಿತ್ರ ಭಾರತಿ ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಶ್ರೀಮತಿ ಚಂಪಾ ಪಿ ಶೆಟ್ಟಿ ಅವರ ನಿರ್ದೇಶನದ ‘ಕೋಳಿ ಎಸ್ರು’ ಚಲನಚಿತ್ರವು ಅತ್ಯುತ್ತಮ ಭಾರತೀಯ ಸಿನಿಮಾ ಪ್ರಶಸ್ತಿ ಪಡೆದಿದೆ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಮೊದಲನೆಯ ಪ್ರಶಸ್ತಿಯನ್ನು ಕೃಷ್ಣೇಗೌಡ ಅವರು ನಿರ್ದೇಶಿಸಿದ ‘ನಾನು ಕುಸುಮ’ ಚಲನಚಿತ್ರ ಪಡೆದುಕೊಂಡಿದೆ. ಪೃಥ್ವಿ ಕೊಣನೂರು ನಿರ್ದೇಶನದ ‘ಹದಿನೇಳೆಂಟು’ ಚಲನಚಿತ್ರವು ಎರಡನೆಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದೆ. ಉತ್ಸವ್ ಗೋನಾವರ್ ಅವರ ನಿರ್ದೇಶನದ ‘ಫೋಟೋ’ ಚಲನಚಿತ್ರವು ಮೂರನೆಯ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದಿದೆ. ದೇವೇಂದ್ರ ಬಡಿಗೇರ್ ನಿರ್ದೇಶನದ ‘ಇನ್’ ಸಿನಿಮಾ, ಏಷ್ಯನ್ ಸಿನಿಮಾ ಸ್ಪರ್ಧೆಯ ವಿಶೇಷ ತೀರ್ಪುಗಾರರ  ಮೆಚ್ಚುಗೆಗೆ ಪಾತ್ರವಾಗಿದೆ. 

ಮನ್ಸೋರೆ ನಿರ್ದೇಶನದ ’19:20:21’ ಚಲನಚಿತ್ರವು ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದಿದೆ.    ಶಿವಧ್ವಜ್ ನಿರ್ದೇಶನದ ‘ಕೊರಮ್ಮ’ ಚಲನಚಿತ್ರವು ತೀರ್ಪುಗಾರರ ವಿಶೇಷ ಮನ್ನಣೆಗೆ ಪಾತ್ರವಾಗಿದೆ. ‘ಆದಿವಾಸಿ’ ಮಲಯಾಳಂ ಚಲನಚಿತ್ರವು ಕರ್ನಾಟಕ ಚಲನಚಿತ್ರ ಅಕಾಡೆಮಿಯ ವಿಶೇಷ ಮನ್ನಣೆಗೆ ಪಾತ್ರವಾಗಿದೆ.  ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ‘ಸೌದಿ ವೆಳ್ಳಕ್ಕ’ ಚಲನಚಿತ್ರವು ಎರಡನೇ ಬಹುಮಾನವನ್ನು ಪಡೆದಿದೆ. ತಮಿಳು ನಿರ್ದೇಶಕ ಗೌತಮ್ ರಾಮಚಂದ್ರನ್ ಅವರು ನಿರ್ದೇಶಸಿದ ‘ಗಾರ್ಗಿ’ ಚಲನಚಿತ್ರವು ತೃತೀಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.   ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ. ಪಿ ಎಸ್ ಹರ್ಷ ಅವರು ಪ್ರಶಸ್ತಿಗಳನ್ನು ವಿತರಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಡಿಪಿ ಮುರುಳಿಧರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಅಶೋಕ್ ಕಶ್ಯಪ್, ಕಲಾತ್ಮಕ ನಿರ್ದೇಶಕರಾದ ಎಚ್ಎನ್ ನರಹರಿ ರಾವ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟಾರ್ ಹಿಮಂತರಾಜು ಅವರುಗಳು ಮಾತನಾಡಿದರು.  ಇದೇ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ದೊಡ್ಡಣ್ಣ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Spread the love