ಬೆಂಗಳೂರು: ಅತೀಂದ್ರಿಯ (ಟ್ರಾನ್ಸೆಂಡೆಂಟಲ್) ಕಥನಗಳ ಸಿನಿಮಾಗಳಲ್ಲಿ ಆಳವಾದ ಅಭಿವ್ಯಕ್ತಿಯ ಹುಡುಕಾಟವಿರುತ್ತದೆ ಮತ್ತು ಅದು ಪ್ರೇಕ್ಷಕನನ್ನು ತಾತ್ವಿಕವಾದ ಚಿಂತನೆಗೆ ಒಡ್ಡುತ್ತದೆ ಎಂದು ಶ್ರೀಲಂಕಾದ ಚಿತ್ರ ನಿರ್ದೇಶಕ ವಿಮುಕ್ತಿ ಜಯಸುಂದರ ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಐದನೇ ದಿನವಾದ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಸಿನಿಮಾಗಳು ಅಭಿವ್ಯಕ್ತಿ ಸಾತಂತ್ರ್ಯವನ್ನು ಎತ್ತಿಹಿಡಿಯುವ ಮೂಲಕ ಪ್ರೇಕ್ಷಕನಿಗೆ ಮಿತಿ ಇಲ್ಲದ ಅನುಭವ ನೀಡುತ್ತವೆ ಎಂದು ಹೇಳಿದರು.

ಪ್ರೇಕ್ಷಕ ಮತ್ತು ಪರದೆಯ ನಡುವೆ ತನ್ಮಯತೆ ಮೂಡಿದಾಗ ಮಾತ್ರ ಆತ ಸಿನಿಮಾದೊಳಗಿನ ಜಗತ್ತಿಗೆ ತೆರೆದುಕೊಳ್ಳುತ್ತಾನೆ ಎಂದರು.

‘ನಾನು ಚಿಕ್ಕವನಾಗಿದ್ದಾಗ ಅಮ್ಮ ನನ್ನನ್ನು ಸಿನಿಮಾಗೆ ಕರೆದುಕೊಂಡು ಹೋಗುತ್ತಿದ್ದರು. ಚಿತ್ರಮಂದಿರದಲ್ಲಿ ಸಿನಿಮಾ ಆರಂಭವಾಗುವುದಕ್ಕೂ ಮುನ್ನ ಪ್ರೇಕ್ಷಕರು ಬಿಳಿಯ ಪರದೆಯನ್ನೇ ನೋಡಿ ಕಾತರದಿಂದ ಕಾಯುತ್ತಿರುವುದನ್ನು ಕಂಡಾಗ ನನಗೆ ಅಚ್ಚರಿಯಾಗುತ್ತಿತ್ತು. ಆ ಪರದೆಯಲ್ಲಿ ಸಿನಿಮಾ ಎಂಬ ಮಾಂತ್ರಿಕ ಜಗತ್ತು ಮೂಡಿ ಬಂದಾಗ ನಾನೂ ತನ್ಮಯನಾಗುತ್ತಿದ್ದೆ. ಈ ಅಚ್ಚರಿಯೇ ಮುಂದೆ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು’ ಎಂದು ಅವರು ತಮ್ಮ ಸಿನಿ ಪಯಣದ ಹಾದಿಯನ್ನು ಮೆಲುಕು ಹಾಕಿದರು.

‘ಸಿನಿಮಾಗೆ ಯಾವುದೇ ಭಾಷೆಯ ಅಗತ್ಯವಿಲ್ಲ, ಏಕೆಂದರೆ ಅದುವೇ ಒಂದು ಭಾಷೆಯಾಗಿದೆ. ಸಿನಿಮಾ ನಿಮ್ಮನ್ನು ತಲುಪುವುದಿಲ್ಲ. ನೀವೇ ಅದನ್ನು ತಲುಪಬೇಕು. ಹಾಗಿದ್ದರೆ ಮಾತ್ರ ಒಳ್ಳೆಯ ಪ್ರೇಕ್ಷಕರಾಗಲು ಸಾಧ್ಯ’ ಎಂದು ಹೇಳಿದರು.

ಮೌಖಿಕವಾಗಿ ಕಥೆ ಹೇಳುವಾಗ ಅದು ಬೇರೆ ಬೇರೆ ಕೇಳುಗರಲ್ಲಿ ವಿಭಿನ್ನ ಕಲ್ಪನಾಲೋಕವನ್ನು ಸೃಷ್ಟಿಸಿದಂತೆ, ಸಿನಿಮಾ ಕೂಡ ಪ್ರತಿಯೊಬ್ಬ ಪ್ರೇಕ್ಷಕನಿಗೂ ವಿಭಿನ್ನ ಅನುಭವ ನೀಡಬೇಕು. ಚಿತ್ರದಲ್ಲಿ ಪ್ರೇಕ್ಷಕರ ಕಲ್ಪನೆಗೂ ಜಾಗವಿರಬೇಕು ಎಂದು ಸಲಹೆ ನೀಡಿದರು.

ಶ್ರೀಲಂಕಾ ಸಣ್ಣ ದ್ವೀಪ ರಾಷ್ಟ್ರವೆಂಬುದು ಮುಖ್ಯವಲ್ಲ. ಜನರ ಅನುಭವಗಳೇ ಮುಖ್ಯ. ಈ ಕಾರಣಕ್ಕೆ ಅತ್ಯುತ್ತಮ ಚಿತ್ರಗಳು ಅಲ್ಲಿಯೂ ಮೂಡಿಬರುತ್ತಿವೆ ಎಂದು ಹೇಳಿದರು.

‘ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳು ನನ್ನ ದೃಷ್ಟಿಯಲ್ಲಿ ಒಂದೇ. ಕಮರ್ಷಿಯಲ್ ಚಿತ್ರಗಳಿಂದ ಹೆಚ್ಚಿನ ಲಾಭ ಸಿಗಬಹುದು ಮತ್ತು ಶೀಘ್ರ ಪ್ರಸಿದ್ಧಿಯೂ ಲಭಿಸಬಹುದು. ಆದರೆ ಕಲಾತ್ಮಕ ಚಿತ್ರಗಳಿಂದ ಇವುಗಳನ್ನು ನಿರೀಕ್ಷಿಸದಿದ್ದರೂ ಅವು ತಮ್ಮದೇ ಆದ ಛಾಪನ್ನು ಮೂಡಿಸುತ್ತವೆ’ ಎಂದು ತಿಳಿಸಿದರು.

Source : Prajavani

Spread the love