ಬೆಂಗಳೂರು: ಯಾವುದೇ ಕ್ಷೇತ್ರದಲ್ಲಿ ಮಹಿಳೆ ಸಾಧಿಸಬೇಕೆಂದರೆ ಅವಳು ಮತ್ತೆ ಮತ್ತೆ ತಾನು ಅರ್ಹಳು ಎಂಬುದನ್ನು ಸಾಬೀತುಪಡಿಸುತ್ತಲೇ ಇರಬೇಕಾಗುತ್ತದೆ. ಇದಕ್ಕೆ ಸಿನಿಮಾ ಕ್ಷೇತ್ರ ಕೂಡ ಹೊರತಲ್ಲ ಎಂದು ಚಲನಚಿತ್ರ ನಿರ್ದೇಶಕಿ, ರಂಗಭೂಮಿ ಕಲಾವಿದೆ ಚಂಪಾ ಶೆಟ್ಟಿ ಹೇಳಿದರು.

ಅವರು ಇಂದು 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಎಲ್ಲ ತೊಡಕುಗಳನ್ನು ದಾಟಿ ಸಾರ್ವಜನಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕೆಂದರೆ ಅನೇಕ ಬಗೆಯ ಸಂಘರ್ಷಗಳನ್ನು ಎದುರಿಸಬೇಕಾಗುತ್ತದೆ. ಅಂದರೆ ಯಾವುದೇ ಕೆಲಸ ಪುರುಷರಿಗೆ ಸಿಗುವಷ್ಟು ಸರಳ, ಸಲೀಸು ಮಹಿಳೆಯರಿಗೆ ಸಾಧ್ಯವಿಲ್ಲ. ಹಾಗಂತ ತಾಯಿ ಹೃದಯದ ಪುರುಷರು ಇದ್ದಾರೆ. ಅವರಿಂದ ಬೆಂಬಲ ಸಿಗುತ್ತದೆ. ಹೀಗಿದ್ದೂ ಮಹಿಳೆ ಎನ್ನುವ ಟ್ಯಾಗ್‌ ನಿಂದ ಹೊರಬರುವುದು ಅಷ್ಟು ಸುಲಭದ್ದಲ್ಲ ಎಂದರು.

ಚಿತ್ರರಂಗದಲ್ಲಿ ಒಬ್ಬ ನಿರ್ದೇಶಕಿಯಾಗಿ, ಮಹಿಳೆ ಎನ್ನುವ ತಾರತಮ್ಯವನ್ನು ನೀವು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರವಾಗಿ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು.

ಇವರ ಮಾತಿಗೆ ಪುಷ್ಟಿ ನೀಡುವಂತೆ ನಲ್ಕೆ ಸಿನಿಮಾದ ನಿರ್ದೇಶಕಿ ತೃಪ್ತಿ ಸುಂದರ್‌ ಅಭಿಕರ್‌ ಅವರು, ಮಹಿಳೆ ಎನ್ನುವ ಕಾರಣಕ್ಕೆ ನನಗೆ ಸಮಸ್ಯೆಗಳಾಗಲಿಲ್ಲ. ಆದರೆ ನಮ್ಮ ಸಮಾಜದಲ್ಲಿ ಮಹಿಳೆ ಎನ್ನುವ ತಾರತಮ್ಯ ಮೊದಲಿನಿಂದಲೂ ಇದೆ, ಅದು ನಮ್ಮ ಮನಸ್ಥಿತಿಯಲ್ಲಿ, ಭಾಷಾ ಪ್ರಯೋಗದಲ್ಲಿ ಕೂಡ ಇದೆ. ಒಂದು ದಿನ ನಮ್ಮನೆಯವರು ಸ್ಟುಡಿಯೋಕ್ಕೆ ಫೊನ್‌ ಮಾಡಿ ನನ್ನ ಹೆಂಡತಿ ಬರ್ತಿದ್ದಾಳೆ ಎಂದರು. ನಾನು ಅಲ್ಲ, ನಿರ್ದೇಶಕರು ಬರ್ತಿದ್ದಾರೆ ಅಂತ ಹೇಳಿ ಎಂದು ತಿದ್ದಿಸಿ ಮತ್ತೆ ಫೋನ್‌ ಮಾಡಿಸಿದೆ, ಎಂದು ನೆನಪಿಸಿಕೊಂಡರು. ಸಿನಿಮಾ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಅನೇಕರು ಚಿತ್ರಕಥೆ ಮಾಡುವಾಗ ನಾವು ಸಿಗರೇಟ್‌ ಸೇದುತ್ತಾ, ಡ್ರಿಂಕ್ಸ್‌ ಮಾಡ್ತಾ ಬರೀತೀವಿ ಎನ್ನುತ್ತಾರೆ. ಆದರೆ ನಾನು ಮಾತ್ರ ಚಿತ್ರಾನ್ನ ಮಾಡುತ್ತಾ ಚಿತ್ರಕತೆ ಬಗ್ಗೆ ಯೋಚಿಸುತ್ತಿದ್ದೆ ಎಂದು ಸಿನಿಮಾ ಮಾಡುವಾಗಿನ ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.

ನಾನು ಕುಸುಮಾ ಸಿನಿಮಾದ ನಿರ್ದೇಶಕ ಕೃಷ್ಣೇಗೌಡ, ಮಹಿಳೆಯ ಸಮಸ್ಯೆ ಎಲ್ಲ ಕಾಲದಲ್ಲೂ ಒಂದೇ ಇದೆ. ಒಬ್ಬ ಹೆಣ್ಣುಮಗಳು ಬಲಿಷ್ಠರ ಕೈಗೆ ಸಿಕ್ಕಾಗ ಅವಳು ಅಸಹಾಯಕಳಾಗುತ್ತಾಳೆ. ಅದು ಎಲ್ಲ ಕಾಲಕ್ಕೂ ಇದೆ ಎಂಬುದನ್ನು ನಮ್ಮ ಸಿನಿಮಾ ಹೇಳುತ್ತದೆ ಎಂದರು.

ಒಂದು ಸಾಕ್ಷ್ಯ ಚಿತ್ರವಾಗುವ ಅಪಾಯಗಳನ್ನು ತಪ್ಪಿಸಿಕೊಂಡು 19.20.21 ಸಿನಿಮಾವನ್ನು ಮಾಡಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ನಿರ್ದೇಶಕ ಮನ್ಸೋರೆ ಅವರು, 2012 ರಿಂದಲೂ ಈ ವಸ್ತು ನನ್ನನ್ನು ಕಾಡುತ್ತಲೇ ಇತ್ತು, ಕರ್ನಾಟಕದಲ್ಲಿ ನಕ್ಸಲೈಟ್‌ ಚಳವಳಿ ಕುಸಿಯುತ್ತ ಬರುತ್ತಿದೆ. ಈ ಕುರಿತು ಒಂದು ಸಾಕ್ಷ್ಯ ಚಿತ್ರಮಾಡಬೇಕು ಎಂಬುದು ನನ್ನ ಮನಸ್ಸಿನಲ್ಲಿತ್ತು. ಇದಕ್ಕಾಗಿ ಕೊತ್ಲೂರಿಗೆ ಹೋಗಲು ಸುಮಾರು 8 ಕಿ.ಮೀ ದೂರ ಕಾಡು ದಾರಿಯಲ್ಲಿ ನಡೆದುಕೊಂಡು ಹೋಗುವಾಗ ನನ್ನಲ್ಲಿ ಒಬ್ಬ ಸಿನಿಮಾ ನಿರ್ದೇಶಕನಿಗಿಂತ ಹೆಚ್ಚಾಗಿ ಒಬ್ಬ ಮನುಷ್ಯ ಜಾಗೃತನಾದ. ಇವರಿಗಾಗಿ ನಾನೇನಾದರೂ ಮಾಡಬೇಕೆಂದು ಇದ್ದದ್ದನ್ನು ಇದ್ದಹಾಗೇ ಚಿತ್ರೀಕರಿಸುತ್ತಾ ಹೋದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಮಠಮಾನ್ಯಗಳ ಕುರಿತು ಸಿನಿಮಾಗಳಲ್ಲಿ ಪವಾಡಗಳನ್ನೇ ಹೆಚ್ಚಾಗಿ ತೋರಿಸಲಾಗುತ್ತದೆ. ಅದನ್ನು ಹೊರತುಪಡಿಸಿ ಅವರ ಸಾಮಾಜಿಕ ಕಾರ್ಯಗಳನ್ನು ಹೆಚ್ಚು ತೋರಿಸಬೇಕೆಂದು ಅಂದುಕೊಂಡೆ, ಅದರಂತೆ ಮಾಡಿದೆ. ಇಂದು ಮಠಮಾನ್ಯಗಳು ಬೇರೆಯದೇ ಹಾದಿ ಹಿಡಿಯುತ್ತಿವೆ. ಈ ಹಿನ್ನೆಲೆಯಲ್ಲಿ ನೀವು ವಿರಾಟಪುರ ವಿರಾಗಿ ಸಿನಿಮಾ ಮಾಡುವಾಗ ಒಂದು ಅಳುಕು ಕಾಡಲಿಲ್ವಾ ಎಂದು ಕೇಳಿದ ಪ್ರಶ್ನೆಗೆ, ಒಂದೆರೆಡು ಬೇಡದ ಘಟನೆಗಳು ನಡೆದಾಕ್ಷಣ ಅದನ್ನೇ ಸಾಮಾನ್ಯೀಕರಣಮಾಡಕೂಡದು. ಹಾಗೆ ನೋಡಿದರೆ ನಮ್ಮಲ್ಲಿ ಬಡವರಿಗೆ ಶಿಕ್ಷಣ ದೊರಕಿದ್ದು ಮಠಮಾನ್ಯಗಳಿಂದಲೇ ಎಂಬುದು ಮರೆಯಕೂಡದು ಎಂದರು.

ಉಳಿದಂತೆ ಹರೀಶ್‌ ಕುಮಾರ್‌, ಮಲಯಾಳಂನ ಫ್ಯಾಮಿಲಿ ಸಿನಿಮಾದ ಡಾನ್‌ ಪಾಲ್ಲತ್ರ ತಮ್ಮ ಅನುಭವಗಳನ್ನು ಹಂಚಿಕೊಂಡರು. ಚಿತ್ರೋತ್ಸವದ ಉಪಕಲಾತ್ಮಕ ನಿರ್ದೇಶಕ ಡಾ.ಪ್ರದೀಪ್‌ ಕೆಂಚನೂರು ಕಾರ್ಯಕ್ರಮ ನಿರ್ವಹಿಸಿದರು.

Spread the love