ಬೆಂಗಳೂರು: 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕೊನೆಯ ದಿನವಾದ ಗುರುವಾರ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಆಗಮಿಸುತ್ತಿದ್ದಾರೆ. ಒರಾಯನ್ ಮಾಲ್ ನಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಚಿತ್ರೋತ್ಸವದಲ್ಲಿ 55 ರಾಷ್ಟ್ರಗಳಿಂದ ಬಂದ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಂಡಿವೆ.

ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ, ಕನ್ನಡಿಗ ವಿ.ಕೆ.ಮೂರ್ತಿ ಅವರ ಶತಮಾನೋತ್ಸವದ ಅಂಗವಾಗಿ, ಅವರು ಛಾಯಾಗ್ರಹಣ ಮಾಡಿದ ಸಿನಿಮಾಗಳು, ಹಾಂಗ್ ಕಾಂಗ್ ದೇಶದ ನಿರ್ದೇಶಕ ವಾಂಗ್ ಕರ್ ವಾಯ್ ಹಾಗೂ ಆಫ್ರಿಕಾ ನಿರ್ದೇಶಕ ಔಸ್ಮಾನೆ ಸೆಂಬೆನೆ ಸಿನಿಮಾಗಳು, ವಿಶ್ವ ಸಿನಿಮಾಗಳು ಮತ್ತು ಕನ್ನಡದ ಚಿತ್ರಗಳನ್ನು ವೀಕ್ಷಿಸುತ್ತಿರುವ ಸಿನಿಪ್ರಿಯರಿಗೆ ಇದೊಂದು ಹಬ್ಬವೇ ಸರಿ.

ಈ ಚಲನಚಿತ್ರೋತ್ಸವದಲ್ಲಿ ಸಿನಿಮಾ ಆಸಕ್ತರಿಗಾಗಿ ಮಾಸ್ಟರ್ ಕ್ಲಾಸ್ ಕಾರ್ಯಾಗಾರವನ್ನು ಸಹ ಆಯೋಜಿಸಿಲಾಗಿತ್ತು. ಇದರಲ್ಲಿ ಪರಿಣಿತ ನಿರ್ದೇಶಕರಿಂದ ಸಂವಾದವನ್ನು ನಡೆಸಲಾಗಿದೆ. ಮಕ್ಕಳ ಸಿನಿಮಾ, ಛಾಯಾಗ್ರಹಣ ಮತ್ತು ಅತೀಂದ್ರಿಯ (ಟ್ರಾನ್ಸೆಂಡೆಂಟಲ್) ಕಥನಗಳು ಸೇರಿದಂತೆ ಸಿನಿಮಾ ತಂತ್ರಜ್ಞಾನದ ಕುರಿತು ಚರ್ಚೆ ನಡೆಸಲಾಯಿತು. ಹಾಡಿಗಾಗಿ ಆಸ್ಕರ್ ಪ್ರಶಸ್ತಿ ಪಡೆದ ಆರ್ ಆರ್ ಆರ್ ಸಿನಿಮಾದ ಚಿತ್ರಕಥೆ ಬರೆದ ವಿ. ವಿಜಯೇಂದ್ರ ಪ್ರಸಾದ್ ಅವರು ಕೂಡ, ಚಿತ್ರೋತ್ಸವದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ವಿಶೇಷ.  

Spread the love