ಬೆಂಗಳೂರು: ‘ಶಾಲೆಗಳಲ್ಲಿ ಇತರ ವಿಷಯಗಳನ್ನು ಕಲಿಸಿದಂತೆ ಅಭಿನಯ ಕೂಡ ಪಠ್ಯ ವಿಷಯವಾಗಬೇಕು. ಹಾಗಾದರೆ ಮಕ್ಕಳಿಗೆ ಮುಂದೆ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಲು ಅನುಕೂಲವಾಗುತ್ತದೆ’ಎಂದು ಚಿತ್ರನಟಿ ಹೇಮಾ ಪಂಚಮುಖಿ ಆಶಯ ವ್ಯಕ್ತಪಡಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮಕ್ಕಳ ಸಿನಿಮಾ-ಮುಂದಿನ ದಾರಿ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಲೆಯಲ್ಲೇ ಅಭಿನಯ ಕಲಿಸಿದರೆ ಪೋಷಕರು ಕೂಡ ತಮ್ಮ ಮಕ್ಕಳನ್ನು ಇತರ ಕಲಿಕಾ ಚಟುವಟಿಕೆಗಳಿಗೆ ಕಳುಹಿಸಿದಂತೆ ಸಿನಿಮಾ ಕ್ಷೇತ್ರಕ್ಕೂ ಕಳುಹಿಸುತ್ತಾರೆ’ ಎಂದರು.

‘ದೃಶ್ಯ ಮಾಧ್ಯಮವು ಪುಸ್ತಕದ ಓದಿಗಿಂತಲೂ ಹೆಚ್ಚು ಪರಿಣಾಮಕಾರಿ. ಇದು ಮಕ್ಕಳ ಮನಸ್ಸಿನಲ್ಲಿ ಗಾಢವಾಗಿ ಪ್ರಭಾವ ಬೀರುತ್ತದೆ. ಆದರೆ ಕೆಟ್ಟ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿ ಪೋಷಕರ ಮೇಲಿದೆ’ ಎಂದೂ ಹೇಳಿದ್ದಾರೆ.

‘ಮಕ್ಕಳ ಮುಗ್ಧತೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿ, ಸಿನಿಮಾಗಳಲ್ಲಿ ದೊಡ್ಡವರು ಹೇಳುವ ಸಂಭಾಷಣೆಗಳನ್ನು ಮಕ್ಕಳ ಬಾಯಲ್ಲಿ ಹೇಳಿಸಿ ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡಬೇಡಿ’ ಎಂದೂ ಅವರು ಕಿವಿಮಾತು ಹೇಳಿದರು.

ಮಾಸ್ಟರ್ ಮಂಜುನಾಥ್ ಮಾತನಾಡಿ, ‘ಮಕ್ಕಳ ಸಿನಿಮಾಗಳು ದೊಡ್ಡವರ ಮೇಲೂ ಪರಿಣಾಮ ಬೀರುವಂತಿರಬೇಕು. ಹಾಗಿದ್ದರೆ ಮಾತ್ರ ಅಂತಹ ಚಿತ್ರಗಳು ಯಶಸ್ವಿಯಾಗುತ್ತವೆ. ಇಂದು ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಸಿನಿಮಾಗಳು ಕಡಿಮೆಯಾಗುತ್ತಿವೆ’ ಎಂದೂ ಖೇದ ವ್ಯಕ್ತಪಡಿಸಿದರು.

‘ನಾನು ಬಾಲನಟನಾಗಿ ಅಭಿನಯಿಸುತ್ತಿದ್ದ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳು ಇರಲಿಲ್ಲ. ಹಾಗಾಗಿ ನಮ್ಮನ್ನು ಗುರುತಿಸುವವರ ಸಂಖ್ಯೆ ಕೂಡ ಸೀಮಿತವಾಗಿತ್ತು. ಇಂದು ಕಾಲ ಬದಲಾಗಿದೆ ಸಾಮಾಜಿಕ ಮಾಧ್ಯಮಗಳ ಮೂಲಕ ಅಲ್ಪ ಕಾಲದಲ್ಲೇ ಪ್ರಸಿದ್ಧಿ ಪಡೆಯಬಹುದು’ ಎಂದು ಅಭಿಪ್ರಾಯಪಟ್ಟರು.

‘1980, 90ರ ದಶಕಗಳ ಬಳಿಕ ಸಿನಿಮಾಗಳಲ್ಲಿ ಮಕ್ಕಳ ಪಾತ್ರಗಳು ಕಡಿಮೆಯಾಗಿವೆ. ಮಕ್ಕಳ ಸಿನಿಮಾ ಎಂದು ಮುದ್ರೆಯೊತ್ತಿರುವ ಸಿನಿಮಾಗಳಲ್ಲಿ ಮಾತ್ರವಲ್ಲ ಪ್ರತಿ ಸಿನಿಮಾದಲ್ಲೂ ಅವರ ಪಾತ್ರಗಳು ಇರಬೇಕು’ ಎಂದರು.

ಮಾಸ್ಟರ್ ಆನಂದ್ ಮಾತನಾಡಿ, ‘ಇಂದು ‘ಬೇಡಿಕೆ’ ಮತ್ತು ‘ವಿತರಣೆ’ಯ ಕಾಲ. ಹಾಗಾಗಿ ಸಿನಿಮಾದ ವಿಷಯ ಮುಖ್ಯವಾಗಿರುತ್ತದೆ. ರೋಚಕ ವಿಷಯಗಳುಳ್ಳ ಮಕ್ಕಳ ಸಿನಿಮಾಗಳು ನಿರ್ಮಾಣವಾದರೆ ಅದಕ್ಕೂ ಬೇಡಿಕೆ ಬರುತ್ತದೆ’ ಎಂದರು.

‘ಮಕ್ಕಳ ಸಿನಿಮಾ ನಿರ್ಮಾಣಕ್ಕೆ ಸರ್ಕಾರವು ನೆರವು ನೀಡಿದರೆ ಸಾಲದು. ಇಂತಹ ಸಿನಿಮಾಗಳ ವಿಷಯವನ್ನು ಆಯ್ಕೆ ಮಾಡುವ ಸಮಿತಿಯನ್ನು ರಚಿಸಬೇಕು ಎಂದು ಆಗ್ರಹಿಸಿದರು.

ಕ್ರೇನ್ ಲ್ಯಾಂಟರ್ನ್ಎಂಬ ದೃಶ್ಯಕಾವ್ಯ

ಚಲನಚಿತ್ರೋತ್ಸವದ ಮೊದಲ ದಿನ ಪ್ರದರ್ಶನಗೊಂಡ ಅಜರ್ಬೈಜಾನ್ ದೇಶದ ‘ಕ್ರೇನ್ ಲ್ಯಾಂಟರ್ನ್ ಎಂಬ ಸಿನಿಮಾವೂ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

2021ರಲ್ಲಿ ಬಿಡುಗಡೆಗೊಂಡಿದ್ದ ಹಿಲಾಲ್ ಬೈದರೋವ್ ನಿರ್ದೇಶನದ ಈ ಚಿತ್ರವು ಕಾನೂನು ವಿದ್ಯಾರ್ಥಿಯೊಬ್ಬ ಅಪರಾಧಿಯೊಬ್ಬನ ಹಿನ್ನೆಲೆ ಅರಸಿ ಸಾಗುವ ರೋಚಕ ಕಥನವನ್ನು ಹೊಂದಿದೆ.

ನಾಲ್ವರು ಮಹಿಳೆಯರನ್ನು ಅಪಹರಿಸಿದ್ದಕ್ಕಾಗಿ ಜೈಲಿನಲ್ಲಿರುವ ದಾವೂದ್‌ ಎಂಬಾತ ಈ ಚಿತ್ರದ ಪ್ರಮುಖ ಕೇಂದ್ರ ಬಿಂದು. ಈತನ ಪ್ರಕರಣದ ಬೆನ್ನುಹತ್ತಿರುವ ಕಾನೂನು ವಿದ್ಯಾರ್ಥಿ ಮೂಸಾ, ಸಂತ್ರಸ್ತೆಯರನ್ನು ಭೇಟಿಯಾಗುತ್ತಾನೆ. ಆದರೆ ಅವರು ಯಾರು ಕೂಡ ದಾವೂದ್‌ ವಿರುದ್ಧ ಆರೋಪ ಮಾಡಲು ಬಯಸುವುದಿಲ್ಲ. ಹೀಗೆ ದಾವೂದ್‌ ನ ಭೂತಕಾಲ ಅರಸುವ ಮೂಸಾನ ಮೂಲಕ ಇಡೀ ಚಿತ್ರದ ಕತೆಯು ಮುಂದೆ ಸಾಗುತ್ತದೆ.

ಈ ಚಿತ್ರದುದ್ದಕ್ಕೂ ದಾವೂದ್‌ ಹಾಗೂ ಸಂತ್ರಸ್ತೆಯರು ತೋರಿಕೆಯ ಬಲಿಪಶುಗಳಂತೆ ಕಂಡುಬರುತ್ತಾರೆ. ಇಡೀ ಚಿತ್ರದುದ್ದಕ್ಕೂ ವಿಷಾದದ ಛಾಯೆ ಮೂಡಿ ಬಂದು ಮನಸ್ಸನ್ನು ಆರ್ದ್ರಗೊಳಿಸುತ್ತದೆ.

ಕಾಡು, ಮರುಭೂಮಿ, ಹಿಮಪಾತ, ಹಕ್ಕಿಗಳ ಕಲರವ, ಮಿಡತೆಗಳು ಸದ್ದು ಇವೆಲ್ಲವೂ ಈ ಚಿತ್ರದ ಚೌಕಟ್ಟಿನೊಳಗೆ ಮೂಡಿ ಬಂದು ಪ್ರೇಕ್ಷಕರಿಗೆ ವಿಭಿನ್ನವಾದ ದೃಶ್ಯಕಾವ್ಯಾನುಭವ ಉಂಟು ಮಾಡುತ್ತದೆ.

***

ಎಲ್ಲಾ ಸೌಕರ್ಯಗಳು ಒಂದೇ ಸೂರಿನಡಿ ಸಿಗುವಂತಹ ಚಿತ್ರನಗರಿಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಬೇಕು

ಮಾಸ್ಟರ್ ಮಂಜುನಾಥ್, ನಟ

ಸಾಮಾಜಿಕ ಮಾಧ್ಯಮಗಳು ಮಕ್ಕಳ ಮೇಲೆ ದುಷ್ಪರಿಣಾಮ ಬೀರದಂತೆ ಪೋಷಕರು ಎಚ್ಚರದಿಂದಿರಬೇಕು

ಹೇಮಾ ಪಂಚಮುಖಿ, ನಟಿ

ಬಾಲ ಕಲಾವಿದರಿಗೆ ಸಿನಿಮಾ ಮತ್ತು ವಾಸ್ತವಿಕತೆಯ ಅರಿವನ್ನು ಪೋಷಕರು ಮಾಡಿಕೊಡಬೇಕು. ಇಲ್ಲದಿದ್ದರೆ ಅವರ ಭವಿಷ್ಯ ಅತಂತ್ರವಾಗುವ ಅಪಾಯವಿದೆ

ಮಾಸ್ಟರ್ ಆನಂದ್, ನಟ

Source : Prajavani

Spread the love