ಬೆಂಗಳೂರು: ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಪ್ರೇಕ್ಷಕರಿಂದ ಬೇಡಿಕೆ ಇದ್ದರೂ ಪ್ರದರ್ಶನ ವ್ಯವಸ್ಥೆ ಇಲ್ಲದೆ ಉದಯೋನ್ಮುಖ ನಿರ್ಮಾಪಕ ನಿರ್ದೇಶಕರು ಅಸಹಾಯಕರಾಗಿದ್ದಾರೆಂದು ಚಲನಚಿತ್ರ ನಿರ್ದೇಶಕರು ಅಭಿಪ್ರಾಯಪಟ್ಟರು.

ಪ್ರಾದೇಶಿಕ ವಸ್ತುಗಳಿರುವ ನಮ್ಮ ನೆಲಮೂಲದ ಕಥೆಗಳು ಚಲನಚಿತ್ರವಾಗಿ ಅಪಾರ ಯಶಸ್ಸು ಪಡೆದಿರುವ ಉದಾಹರಣೆ ಕಣ್ಮುಂದೆ ಇದ್ದರೂ ಚಿತ್ರಮಂದಿರಗಳಲ್ಲಾಗಲಿ, ಒಟಿಟಿ ವೇದಿಕೆಯಲ್ಲಾಗಲಿ ಅವುಗಳಿಗೆ ಅವಕಾಶಗಳು ಇಲ್ಲದಿರುವುದರಿಂದ ಹೊಸ ಪ್ರತಿಭೆಗಳು ಚಿತ್ರನಿರ್ಮಾಣ ಮಾಡಲು ಹರಸಾಹಸ ಪಡಬೇಕಾಗಿದೆ ಎಂದು ಒಮ್ಮತದ ಅಭಿಪ್ರಾಯ ಮೂಡಿಬಂದಿತು.

ಯಾವುದೇ ಹೊಸ ತಂತ್ರಜ್ಞಾನಗಳು ಬಂದಾಗ ಅವುಗಳಲ್ಲಿ ಸ್ಥಳೀಯ ಭಾಷಾ ಸಿನಿಮಾಗಳಿಗೆ ಅವಕಾಶ ಕಲ್ಪಿಸುವಂತಿರಬೇಕು, ಆಗ ಮಾತ್ರ ಸ್ಥಳೀಯ ಭಾಷೆಗಳು ಉಳಿಯಲುಸಾಧ್ಯ ಎಂದು ನಿರ್ದೇಶಕ ಶಿವಧ್ವಜ್‌ ಹೇಳಿದರು,

ಅವರು ಇಂದು ೧೪ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿನಿಮಾಗಳಿಗೆ ಸರ್ಕಾರದ ಪ್ರೋತ್ಸಾಹ ಧನದ ಅಗತ್ಯದ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಒಟಿಟಿಯಂತಹ ವೇದಿಕೆಗಳಲ್ಲಿ ಕನ್ನಡವೂ ಸೇರಿದಂತೆ ಯಾವುದೇ ಸ್ಥಳೀಯ ಭಾಷೆಗಳ ಸಿನಿಮಾಗಳಿಗೆ ಪ್ರವೇಶವೇ ಸಿಗುವುದಿಲ್ಲ. ಇದರಿಂದ ಆ ಭಾಷೆಯ ಸಿನಿಮಾಗಳಿಗೆ ಸಮಸ್ಯೆಯುಂಟಾಗುತ್ತದೆ. ಇಂದು ಓದುವ ಸಂಖ್ಯೆ ಕಡಿಮೆಯಾಗಿದೆ, ಆ ಜಾಗದಲ್ಲಿ ಸಿನಿಮಾ ಇದೆ, ಭಾಷೆಯನ್ನು ಸಿನಿಮಾಗಳ ಮೂಲಕ ಮಕ್ಕಳು ಕಲಿಯುತ್ತಿದ್ದಾರೆ, ಇಂಥ ಸಂದರ್ಭದಲ್ಲಿ ಸ್ಥಳೀಯ ಭಾಷೆಗಳ ಸಿನಿಮಾಗಳಿಗೆ ಪ್ರಚಾರ ಹೆಚ್ಚು ಅವಶ್ಯ ಎಂದರು.

ಪ್ರೋತ್ಸಾಹ ಧನಕ್ಕಾಗಿಯೇ ಸಿನಿಮಾ ಮಾಡದಿದ್ದರೂ ಸರ್ಕಾರದ ಇಂತಹ ಪ್ರೋತ್ಸಾಹ ಧನ ಖಂಡಿತ ಅಗತ್ಯವಿರುತ್ತದೆ, ಆಗಲಾದರೂ ಒಂದಷ್ಟು ಜನ ಸಿನಿಮಾ ಮಾಡುತ್ತಾರೆಂದು ಆರಾರಿರೋ ಸಿನಿಮಾದ ನಿರ್ದೇಶಕ ಸಂದೀಪ್‌ ಶೆಟ್ಟಿ ಹೇಳಿದರು,

ಬಜೆಟ್‌ ನೋಡಿಕೊಂಡು ಚಿತ್ರಕಥೆ ಮಾಡುವುದಿಲ್ಲದಿದ್ದರೂ ಬಜೆಟ್‌ ಕೂಡ ಅಷ್ಟೇ ಮುಖ್ಯವಾಗಿರುತ್ತದೆ, ಕತೆ ಎಷ್ಟು ಬೇಡುತ್ತದೋ ಅಷ್ಟು ಹಣವನ್ನು ಹಾಕುವುದು ಅನಿವಾರ್ಯವಾಗುತ್ತದೆ, ಹಾಗಾಗಿ ಮೊದಲೇ ಕಡಿಮೆ ಬಜೆಟ್‌ ಅನ್ನು ಯೋಚಿಸಿ ಸಿನಿಮಾ ಮಾಡುವುದೊಳಿತು ಎಂದು ಗಾರ್ಡ್‌ ಸಿನಿಮಾದ ನಿರ್ದೇಶಕ ಉಮೇಶ್‌ ವಿ, ಬಡಿಗೇರ ಅವರು ತಿಳಿಸಿದರು, ಗಾರ್ಡ್‌ ಒಂದು ಭಾರತದ ಮೊಟ್ಟಮೊದಲ ಮಕ್ಕಳ ಮೂಕಿ ಚಿತ್ರವಾಗಿದ್ದು ಇದಕ್ಕೆ ಈಗಾಗಲೇ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದು ನಮ್ಮ ಆತ್ಮವಿಶ್ವಾಸ ಹೆಚ್ಚಿದೆ ಎಂದರು.

ಆರ್ಕೆಸ್ಟ್ರಾ ಮೈಸೂರು ಸಿನಿಮಾದ ಕಲಾವಿದರಾದ ರವಿಪ್ರಸಾದ್‌ ಮಾತನಾಡಿ, ಸಿನಿಮಾ ತಯಾರಿಕೆಗೆ ಬಜೆಟ್‌ ಎಂಬದು ತುಂಬ ಮುಖ್ಯವಾಗುತ್ತದೆ, ಅದನ್ನು ಸ್ವತಃ ನಾವು ಅನುಭವಿಸಿದ್ದೇವೆ, ಈ ಸಿನಿಮಾ ತಯಾರಿಕೆಯೇ ನಮಗೆ ದೊಡ್ಡ ಸವಾಲಿನದ್ದಾಗಿತ್ತು, ಆದರೆ ಇಂತಹ ಚಿತ್ರೋತ್ಸವಗಳು ನಮ್ಮಂಥವರಿಗೆ ದೊಡ್ಡ ವೇದಿಕೆ, ಈ ಮೂಲಕ ಜಗತ್ತಿನವರ ಸಿನಿಮಾ ಆಸಕ್ತರ ಗಮನ ಸೆಳೆಯಲು ಸಾಧ್ಯ ಎಂದರು,

ಹಾಗೆ ನೋಡಿದರೆ ಚಲನಚಿತ್ರ ತಯಾರಿಕೆಗೆ ಸರ್ಕಾರದ ಪ್ರೋತ್ಸಾಹಧನ ತೆಲುಗು ಉದ್ಯಮದಲ್ಲಿಲ್ಲ. ತೆಲುಗು ಸಿನಿಮೋದ್ಯಮ ಯಾವತ್ತೂ ಇಂತಹ ಪ್ರೋತ್ಸಾಹಧಣವನ್ನು ನೆಚ್ಚಿಕೊಂಡಿಲ್ಲ. ಯಾಕೆಂದರೆ ಇಲ್ಲಿ ನಿರ್ದೇಶಕರಿಗಿಂತ ಹೆಚ್ಚು ನಿರ್ಮಾಪಕರಿದ್ದಾರೆ. ಅವರೆಲ್ಲ ಸಿನಿಮಾ ಕುರಿತು ಹೆಚ್ಚು ಆಸಕ್ತಿಯುಳ್ಳವರಾಗಿದ್ದರಿಂದ ತೆಲುಗಿನಲ್ಲಿ ಸಿನಿಮಾ ತಯಾರಿಕೆ ತುಂಬ ಕಷ್ಟದಾಯಕವೇನಿಲ್ಲ, ಹೀಗಿದ್ದೂ ಪ್ರವಾಸೋದ್ಯಮದ ಕುರಿತಂತೆ ಸಿನಿಮಾ ತಯಾರಿಸಿದರೆ ಅದಕ್ಕೆ ಸರ್ಕಾರದ ಪ್ರೋತ್ಸಾಹಧನ ಸಿಗುತ್ತದೆ ಎಂದು ಸಿನಿಮಾ ಬಂಡಿಯ ನಿರ್ದೇಶಕ ಪ್ರವೀಣ್‌ ಕಂದ್ರೆಗುಲಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಫೋಟೋ ಚಿತ್ರದ ನಿರ್ದೇಶಕ ಉತ್ಸವ್‌ ಗುನ್ನಾವರ್‌, ಅವಿನಾಶ್‌ ಶೆಟ್ಟಿ ತಮ್ಮ ಅನುಭವವನ್ನು ಹಂಚಿಕೊಂಡರು. ನಿರ್ದೇಶಕ ಪಿ.ಶೇಷಾದ್ರಿ ಕಾರ್ಯಕ್ರಮ ನಿರ್ವಹಿಸಿದರು,

Spread the love