ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸದಲ್ಲಿ ಮಾಚ್೯. 27ರ ಸೋಮವಾರ ಮಧ್ಯಾಹ್ನ 3.30ಕ್ಕೆ ಶತಮಾನ ಕಂಡ ಸಾಧಕರ ಸ್ಮರಣೆಯ ಕಾರ್ಯಕ್ರಮ ನಡೆಯಿತು. ಈ ವರ್ಷ ಶತಮಾನೋತ್ಸವನ್ನು ಆಚರಿಸಿ ಕೊಳ್ಳುತ್ತಿರುವ ಎಂ.ವಿ.ಕೃಷ್ಣಸ್ವಾಮಿ, ನರಸಿಂಹ ರಾಜು ಮತ್ತು ಎಸ್.ಕೆ.ಎ. ಚಾರಿಯವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಎಂ.ವಿ.ಕೃಷ್ಣಸ್ವಾಮಿಯವರ ಕೊಡುಗೆಗಳನ್ನು ಸ್ಮರಿಸಿದ ಅವರ ನಿಕಟವರ್ತಿ ಎಂ.ಬಿ.ಎಸ್. ಪ್ರಸಾದ್ ಕೃಷ್ಣಸ್ವಾಮಿಯವರು ಕನ್ನಡ ಚಿತ್ರರಂಗಕ್ಕೆ ಕಲಾತ್ಮಕ ಆಯಾಮವನ್ನು ನೀಡಿದ ಮಹನೀಯರು ಎಂದು ಸ್ಮರಿಸಿದರು. ಭಾರತೀಯ ಚಿತ್ರೋತ್ಸವದ ನಿರ್ದೇಶಕರಾಗಿ ಕೂಡ ಮಹತ್ವದ ಕೊಡುಗೆ ನೀಡಿದ್ದ ಅವರು ಕನ್ನಡದಲ್ಲಿ ನಿರ್ದೇಶಿಸಿದ ಎರಡು ಚಿತ್ರಗಳಾದ ‘ಸುಬ್ಬಾಶಾಸ್ತ್ರಿ’ ಮತ್ತು ‘ಪಾಪ ಪುಣ್ಯ’ ಚಿತ್ರ ನಿರ್ಮಾಣದಲ್ಲಿನ ಸೂಕ್ಷ್ಮಗಳನ್ನು ಪರಿಚಯಿಸಿದ್ದವು. ಚಿತ್ರ ಸಮಾಜದ ಚಳುವಳಿಯನ್ನು ಕನ್ನಡದಲ್ಲಿ ಬೆಳೆಸಿದ ಅವರ ಕಾರಣದಿಂದ ಹಲವು ಚಿತ್ರ ಸಮಾಜಗಳು ರೂಪುಗೊಂಡು ಚಲನಚಿತ್ರದ ಕುರಿತು ಚರ್ಚೆ ಸಂವಾದಗಳು ಸಾಧ್ಯವಾದವು ಎಂದು ಸ್ಮರಿಸಿದರು. ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ವಿದೇಶದಲ್ಲಿ ಅವರು ಪಡೆದಿದ್ದ ಅನುಭವವನ್ನು ಅವರು ಸಮರ್ಥವಾಗಿ ಬಳಸಿಕೊಂಡು ಅದು ಕೇವಲ ವ್ಯಕ್ತಿ ವಿವರಣೆಯ ನೆಲೆಯಲ್ಲಿ ನಿಲ್ಲದೆ ಸಾಂಸ್ಕೃತಿ ಅಯಾಮವನ್ನು ಪಡೆಯುವ ನಿಟ್ಟಿನಲ್ಲಿ ಶ್ರಮಿಸಿದರು ಎಂದು ಅವರು ಗುರುತಿಸಿದರು. ಕನ್ನಡದಲ್ಲಿ ಕಲಾತ್ಮಕ ಚಿತ್ರಗಳ ಚಳುವಳಿ ಬೆಳೆಯಲು, ಕನ್ನಡ ಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಪಡೆಯಲು ಅವರ ಕೊಡುಗೆ ಮಹತ್ವದ್ದು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ನರಹರಿ ರಾವ್, ಶಶಿಧರ್, ವೈದ್ಯನಾಥನ್ ಕೃಷ್ಣಸ್ವಾಮಿಯವರ ಕೊಡುಗೆಗಳ ಕುರಿತು ತಮ್ಮ ಅನುಭವಗಳನ್ನು ಹಂಚಿ ಕೊಂಡರು.
ಈ ವರ್ಷ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಕಲಾವಿದ ನರಸಿಂಹ ರಾಜು ಅವರ ಕೊಡುಗೆಗಳನ್ನು ಸ್ಮರಿಸಿದ ಬೆಂಗಳೂರು ನಾಗೇಶ್, ನರಸಿಂಹ ರಾಜು ಹಾಸ್ಯಕ್ಕೆ ತಾರಾ ಮೌಲ್ಯ ತಂದು ಕೊಟ್ಟಂತಹ ಕಲಾವಿದ. ಅವರ ಅಭಿನಯದಲ್ಲಿ ಬಹಳ ಮುಖ್ಯವಾಗಿದ್ದು ಟೈಮಿಂಗ್ಸ್ ಯಾವ ಪಾತ್ರವನ್ನಾದರೂ ಅರಿತು ಅದಕ್ಕೆ ಬೇಕಾದ ನೈಜತೆಯನ್ನು ತರುತ್ತಿದ್ದರು, ಅವರಿದ್ದಲ್ಲಿ ನಗು ಸಹಜವಾಗಿ ಚಿಮ್ಮುತ್ತಿತ್ತು ಪ್ರತಿ ದಿನವೂ ನಾಲ್ಕು ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಕುಟುಂಬದ ಜೊತೆಯಲ್ಲಿ ಕಾಲ ಕಳೆಯಲು ಸಮಯವೇ ಸಿಕ್ಕುತ್ತಿರಲಿಲ್ಲ. ಮಗ ಶ್ರೀಕಾಂತನ ದುರಂತ ಮರಣದ ಸಂದರ್ಭದಲ್ಲಿ ಚಿತ್ರೀಕರಣವನ್ನು ಮಾಡ ಬೇಕಾದ ಅನಿವಾರ್ಯತೆಗೆ ಅವರು ಸಿಲುಕಿದ್ದರು ಎಂದು ಸ್ಮರಿಸಿ ಕೊಂಡರು. ಸ್ಕೈಲ್ಯಾಬ್ ಬೀಳುತ್ತದೆ ಎಂಬ ವದಂತಿ ಹಬ್ಬಿದ್ದಾಗ ಕುಟುಂಬದವರೆಲ್ಲರನ್ನೂ ಕರೆದು ಔತಣ ಕೂಟ ಏರ್ಪಡಿಸಿ ಮರುದಿನ ಚಿರ ನಿದ್ರೆಗೆ ತೆರಳಿದ ವಿಶಿಷ್ಟತೆ ಅವರದು ಎಂದು ನೆನಪು ಮಾಡಿ ಕೊಂಡರು. ಕಲ್ಪನಾ, ದಿನೇಶ್ ಮೊದಲಾದ ಅನೇಕ ಕಲಾವಿದರನ್ನು ಚಿತ್ರರಂಗಕ್ಕೆ ತಂದ ಅವರು ರಂಗಭೂಮಿಗೂ ಕೂಡ ಹೊಸತನ ನೀಡಿದ್ದರು. ‘ಪ್ರೊಫೆಸರ್ ಹುಚ್ಚುರಾಯ’ ಚಿತ್ರ ನಿರ್ಮಿಸುವ ಮೂಲಕ ಹೊಸ ಹಾದಿಯನ್ನು ಅವರು ರೂಪಿಸಿದ್ದರು. ಕನ್ನಡ ಚಿತ್ರರಂಗಕ್ಕೆ ಅವರು ಆಧಾರಸ್ತಂಬವನ್ನು ಹಾಕಿದ್ದರು ಎಂದು ಸ್ಮರಿಸಿ ಕೊಂಡರು. ನರಸಿಂಹ ರಾಜು ಅವರ ಕುಟುಂಬ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವರ್ಷ ಶತಮಾನೋತ್ಸವ ಕಾಣುತ್ತಿರುವ ಇನ್ನೊಬ್ಬ ಸಾಧಕ ಎಸ್.ಕೆ.ಎ. ಚಾರಿಯವರ ಕುರಿತು ಮಾತನಾಡಿದ ಎನ್.ಎಸ್.ಶ್ರೀಧರ ಮೂರ್ತಿ ‘ಗೌರಿ’ ಚಿತ್ರದ ಮೂಲಕ ಕವಿಗೀತೆಗಳ ಪರಂಪರೆ ಆರಂಭಿಸಿದ ಚಾರಿಯವರು ಸಾಹಿತ್ಯ ಮತ್ತು ಸಿನಿಮಾ ನಡುವೆ ಆಗ ರೂಪುಗೊಂಡಿದ್ದ ಅಂತರವನ್ನು ತಗ್ಗಿಸಿ ಸಾಹಿತಿಗಳು ಚಿತ್ರರಂಗದ ಕಡೆಗೆ ಬರಲು ಕಾರಣರಾದರು ಎಂದು ಗುರುತಿಸಿದರು. ಕುವೆಂಪು ಅವರ ನೆಚ್ಚಿನ ಶಿಷ್ಯರಾಗಿದ್ದ ಎಸ್.ಕೆ.ಎ. ಚಾರಿಯವರಿಗೆ ಇದ್ದ ಸಾಹಿತ್ಯದ ಪರಿಣತಿ ಅವರ ಚಿತ್ರಗಳ ಗುಣಾತ್ಮಕತೆಗೆ ಕಾರಣವಾಯಿತು. ಅವರ ಎಲ್ಲಾ ಚಿತ್ರಗಳ ನಡುವೆ ಸಾವಯುವ ಬಂಧವಿದ್ದು ಒಂದು ಚಿತ್ರ ಎತ್ತಿದ ಪ್ರಶ್ನೆಗೆ ಇನ್ನೊಂದು ಚಿತ್ರ ಉತ್ತರಿಸುವುದು ಮಹತ್ವದ ಸಂಗತಿ ಎಂದು ಗುರುತಿಸಿ ಸಂಯಮ ಅವರ ಚಿತ್ರಗಳ ಮಹತ್ವದ ಸಂಗತಿ ಎಂದರು. ಚಿತ್ರಗೀತೆಗಳನ್ನು ಅಳವಡಿಸುವಲ್ಲಿ ಹೊಸತನ ತಂದ ಅವರು ಸಂಭಾಷಣೆ ಮತ್ತು ಪಾತ್ರ ನಿರ್ವಹಣೆಯಲ್ಲಿ ವಿಭಿನ್ನತೆ ತಂದಿದ್ದರು. ಮಧ್ಯಮ ವರ್ಗದ ಸ್ವರೂಪ, ಗಂಡು-ಹೆಣ್ಣಿನ ಸಂಬಂಧದಲ್ಲಿನ ಸಂಕೀರ್ಣತೆ, ಬದುಕಿನಲ್ಲಿ ಕಾಮದ ಸ್ಥಾನ ಹೀಗೆ ಹಲವು ಮುಖ್ಯ ಅಂಶಗಳನ್ನು ತಮ್ಮ ಚಿತ್ರಗಳಲ್ಲಿ ಪ್ರಸ್ತಾಪಿಸಿದ್ದ ಅವರು ರಾಜ್ ಕುಮಾರ್, ಕಲ್ಯಾಣ್ ಕುಮಾರ್ ಮತ್ತು ಉದಯ ಕುಮಾರ್ ಮೂವರಿಂದಲೂ ತಮ್ಮ ಚಿತ್ರಗಳಲ್ಲಿ ಹೊಸ ಮಾದರಿ ಅಭಿನಯವನ್ನು ಪಡೆದಿದ್ದರು. ಶ್ರೀನಾಥ್ ಅವರನ್ನು ನಾಯಕರಾಗಿ ಪರಿಚಯಿಸಿದ್ದ ಅವರು ಜಯಲಲಿತಾ ಅವರನ್ನು ನಾಯಕಯಾಗಿ ರೂಪಿಸಿದ್ದರು. ಕಲ್ಪನಾ ಅವರಂತಹ ಕಲಾವಿದೆಯಿಂದ ಭಿನ್ನ ಅಭಿನಯ ಪಡೆದಿದ್ದು ಅವರ ಹೆಗ್ಗಳಿಕೆ. ತಾಂತ್ರಿಕವಾಗಿ ಕ್ಲೊಸ್ ಅಪ್ ಅನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿ ಅದಕ್ಕೆ ಹೊಸ ರೂಪ ನೀಡಿ ಕನ್ನಡ ಚಿತ್ರರಂಗದ ವ್ಯಾಕರಣವನ್ನು ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂದು ಗುರುತಿಸಿದರು. ಪಿ. ಶೇಷಾದ್ರಿಯವರು ಕಾರ್ಯಕ್ರಮವನ್ನು ನಿರ್ವಹಣೆ ಮಾಡಿ ಮೂವರ ಬದುಕಿನ ಮೇಲೆ ಕೂಡ ಬೆಳಕು ಬೀಳುವಂತೆ ಮಾಡಿದರು. ಮೂವರ ಕುರಿತು ಸಾಕ್ಷ್ಯಚಿತ್ರದ ತುಣುಕುಗಳನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.